ಬೆಲ್, ಚಾಲ್ರ್ಸ್ 

1774-1842. ಸ್ಕಾಟ್ಲೆಂಡಿನ ಶರೀರ ವಿಜ್ಞಾನಿ. ಮಿದುಳು ಮತ್ತು ನರಮಂಡಲ ವಿಭಾಗದಲ್ಲಿ ಪ್ರಾವೀಣ್ಯ ಪಡೆದಿದ್ದ. ಪ್ರೌಢಶಾಲಾ ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಎಡಿನ್‍ಬರೋದಲ್ಲಿ ಪೂರೈಸಿ ಶರೀರ ವಿಜ್ಞಾನದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ. ಮಿದುಳು ಮತ್ತು ನರಮಂಡಲಗಳ ಕ್ರಿಯಾ ವಿನ್ಯಾಸ ವಿವರಿಸಲು ಯೋಗ್ಯವಾದ ಕೆತ್ತನೆ ಚಿತ್ರ ರಚಿಸಿ ಪ್ರಕಟಿಸಿದ (1802). ಇವುಗಳ ನೆರವಿನಿಂದ ಶರೀರ ವಿಜ್ಞಾನ ಕುರಿತು ಉಪನ್ಯಾಸ ಕೊಟ್ಟ ಮತ್ತು ಮುಖಭಾವದ ಅಂಗರಚನೆ (ಅನಾಟಮಿ ಆಫ್ ಎಕ್ಸ್‍ಸ್ಪ್ರೆಶನ್) ಎಂಬ ಪುಸ್ತಕ ಬರೆದ. 

	ಮನೋವಿಕಾರ ಮತ್ತು ಅನುರಾಗಭಾವಗಳಲ್ಲಿ ಮುಖಭಾವ ಹೇಗಿರುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾನೆ (1804). ಈತ ಬರೆದ ಇನ್ನೊಂದು ಪುಸ್ತಕ ಮಿದುಳಿನ ಅಂಗರಚನೆ ಬಗ್ಗೆ ಹೊಸ ಭಾವನೆಗಳು (1811). ಒಂದೊಂದು ನರವೂ ಮಿದುಳಿನ ಯಾವ ಭಾಗದೊಡನೆ ಸಂಪರ್ಕಹೊಂದಿ ಹೇಗೆ ಕ್ರಿಯೆ ನಿರ್ವಹಿಸುತ್ತದೆ ಎನ್ನುವುದನ್ನು ಇದರಲ್ಲಿ ವಿವರಿಸಿದ್ದಾನೆ. ಈತ ಬರೆದ ಇನ್ನೊಂದು ಪುಸ್ತಕ ಮಾನವಶರೀರ ನರಮಂಡಲ (1820). ನರಮಂಡಲದಲ್ಲಿ ಪ್ರತ್ಯೇಕವಾಗಿ ಜ್ಞಾನೇಂದ್ರಿಯ ಶಾಖೆಯ ತಂತುಗಳೂ ಇದ್ದು ಇವು ಶರೀರದ ಪರಿಧಿಯಿಂದ ಬರುವ ಸಂಜ್ಞೆಗಳನ್ನು ಮಿದುಳಿನ ಜ್ಞಾನೇಂದ್ರಿಯಕ್ಕೆ ತಲಪಿಸುತ್ತವೆ ಎಂಬ ಸಂಗತಿ ಆ ಮೊದಲು ತಿಳಿದಿತ್ತು. ಇದನ್ನು ಬೆಲ್ ದೃಢೀಕರಿಸಿದ. ಇದೇ ದಿಶೆಯಲ್ಲೆ ತನ್ನ ಸಂಶೋಧನೆ ಮುಂದುವರಿಸಿದ ಈತ ಬೆನ್ನು ಹುರಿಯ ಮುಂಬದಿಯ ನರಗಳ ಬುಡಗಳು ಚಾಲಕ ನರಗಳೆಂದು ಮೊತ್ತ ಮೊದಲಿಗೆ ಶೋಧಿಸಿದ. ಇವು ಇತರ ಮಾಂಸಖಂಡಗಳಲ್ಲಿರುವ ನರಕೇಂದ್ರಗಳಿಗೆ ಸೂಚನೆಗಳನ್ನು ಕಳಿಸುತ್ತವೆಂದೂ ಕಂಡುಹಿಡಿದ. ಕೆಲವು ನರಗಳು ಚಾಲಕ ರೀತಿಯೂ (ಮೋಟರ್), ಕೆಲವು ನರಗಳು ಅರಿವುದಾಣದ ರೀತಿಯೂ ಮತ್ತೆ ಕೆಲವು ನರಗಳು ಅರಿವು ಚಾಲಕ ರೀತಿಯೂ ಕೆಲಸಮಾಡುತ್ತವೆಂದು ಶೋಧಿಸಿದ. ವಿಲಿಯಮ್ ಹಾರ್ವೆಯಿಂದ (1578-1657) ರಕ್ತ ಪರಿಚಲನೆಯ ಶೋಧನಾನಂತರ ಆ ಮಟ್ಟದ ಪ್ರಾಮುಖ್ಯದ ಶೋಧ ಇದೇ. 
(ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ